ಕೃಷ್ಣದ್ವೈಪಾಯನ
ವ್ಯಾಸಮಹರ್ಷಿ. ಕೃಷ್ಣವರ್ಣದ ಯಮುನಾ ನದಿಯ ದ್ವೀಪವೊಂದರಲ್ಲಿ ಜನ್ಮ ತಾಳಿದ್ದರಿಂದ ಕೃಷ್ಣದ್ವೈಪಾಯನನೆಂಬ ಹೆಸರನ್ನು ಪಡೆದ; ಕಪ್ಪುಬಣ್ಣದ ಮೈಯುಳ್ಳವನಾಗಿ ಕೃಷ್ಣ ಎನಿಸಿಕೊಂಡನೆಂದು ಪ್ರತೀತಿ. ಬಾದರಾಯಣ, ವೇದವ್ಯಾಸ, ಪಾರಾಶರ್ಯ-ಇವು ಈ ಮುನಿಯ ಇನ್ನೂ ಕೆಲವು ಮುಖ್ಯ ಹೆಸರುಗಳು.

	ಬದರೀವನದಲ್ಲಿ ಆಶ್ರಮವನ್ನು ಮಾಡಿಕೊಂಡು ತಪಸ್ಸು ಮಾಡುತ್ತಿದ್ದುದರಿಂದ ಈತ ಬಾದರಾಯಣನಾದ. ಈ ಹೆಸರಿನಿಂದ ವೇದಾಂತದರ್ಶನದ ಅದರಲ್ಲೂ ವಿಶೇಷವಾಗಿ ಬ್ರಹ್ಮಸೂತ್ರದ, ಕರ್ತೃವೆಂದು ಪ್ರಸಿದ್ಧ ಪಡೆದಿದ್ದಾನೆ.
	ಪುರಾಣಗಳಲ್ಲಿ ಪ್ರತಿಪಾದಿತವಾಗಿರುವಂತೆ ಕಲ್ಪವೊಂದರ (ಒಂದು ಸಾವಿರ ಮಹಾಯುಗಗಳು) ಒಂದೊಂದು ಮಹಾಯುಗದಲ್ಲೂ ವೇದರಾಶಿಯನ್ನು ವಿಭಾಗ ಮಾಡುವುದಕ್ಕೋಸ್ಕರ ವಿಷ್ಣುವೇ ವ್ಯಾಸರೂಪಿಯಾಗಿ ಉದಯಿಸುತ್ತಾನೆ. ವೇದ ವಿಭಾಗ ಮಾಡಿದ ಕಾರಣದಿಂದ ಅಂಥ ಒಬ್ಬೊಬ್ಬ ಮುನಿಗೂ ವ್ಯಾಸ ಅಥವಾ ವೇದವ್ಯಾಸ ಎಂಬ ಹೆಸರು ಬಂದಿದೆ (ಯೋ ವ್ಯಸ್ಯ ವೇದಾಂಶ್ಚತುರಸ್ತಪಸಾಭಗವನೃಷಿ: ಲೋಕೇ ವ್ಯಾಸತ್ವಮಾಪೇದೇ ಕಾಷ್ಣ್ರ್ಯಾತ್ ಕೃಷ್ಣತ್ವಮೇವ ಚ:: ಮಹಾಭಾರತ, ಆದಿಪರ್ವ; ಮತ್ತು ಯಥಾಸೌ ಕುರುತೇ ತನ್ವಾ ವೇದಮೇಕಂ ಪೃಥಕ್ ಪ್ರಭು; : ವೇದವ್ಯಾಸಾಭಿಧಾನಾ ತು ಸಾ ಚ ಮೂರ್ತಿರ್ಮಧುದ್ವಿಷ: :: ವಿಷ್ಣುಪುರಾಣ). ಅಲ್ಲದೆ ಒಂದೊಂದು ಮಹಾಯುಗದ ಒಂದೊಂದು ದ್ವಾಪರದಲ್ಲೂ ಒಬ್ಬೊಬ್ಬ ವೇದವ್ಯಾಸ ಮುನಿಯ ಸಂಭವವಾಗುತ್ತದೆ. ಇಲ್ಲಿಯವರೆಗೆ ಇಪ್ಪತ್ತೇಳು ಮಹಾಯುಗಗಳು ಕಳೆದಿವೆ ; ಪ್ರಚಲಿತ ಮಹಾಯುಗ ಇಪ್ಪತ್ತಂಟನೆಯದು; ಇದರ ದ್ವಾಪರಕ್ಕೆ ಸಂಬಂಧಪಟ್ಟಂತೆ ಕೃಷ್ಣದ್ವೈಪಾಯನ ಮುನಿ ವೇದವ್ಯಾಸನಾಗಿದ್ದಾನೆ.

	ಉಪರಿಚರವಸುವೆಂಬ ರಾಜನಿಗೆ ಮತ್ಸ್ಯಜಾತಳಾಗಿ ಮತ್ಸ್ಯಗಂಧಿಯೆನಿಸಿಕೊಂಡ ಸತ್ಯವತಿಯಲ್ಲಿ ವಸಿಷ್ಠನ ಮೊಮ್ಮಗ ಶಕ್ತಿಮಹರ್ಷಿಯ ಪುತ್ರನಾದ ಪರಾಶರ ಮುನಿಗೆ ಮಗನಾಗಿ ಜನಿಸಿದನಾದ್ದರಿಂದ ಕೃಷ್ಣದ್ವೈಪಾಯನನಿಗೆ ಪರಾಶರ್ಯನೆಂಬ ಹೆಸರು ಬಂತು.

	ಕೌರವರ ಪಿತೃವಾದ ಧೃತರಾಷ್ಟ್ರನ ಮತ್ತು ಪಾಂಡವರ ಜನಕನಾದ ಪಾಂಡುವಿನ ಜೀವನದಲ್ಲಿ ಕೃಷ್ಣದ್ವೈಪಾಯನನ ಪಾತ್ರ ಗಮನಾರ್ಹವಾಗಿದೆ. ಬ್ರಹ್ಮಲೋಕವನ್ನು ಪಡೆದಿದ್ದ ಮಹಾಭಿಷನೆಂಬ ಇಕ್ಷ್ವಾಕುರಾಜ ಗಂಗೆಯಲ್ಲಿ ಅನುರಾಗ ತೋರಿಸಿದ್ದರಿಂದ ಬ್ರಹ್ಮನ ಶಾಪಕ್ಕೆ ಸಿಕ್ಕಿ ತತ್ಪರಿಣಾಮವಾಗಿ ಚಂದ್ರವಂಶದ ಪ್ರತೀಪರಾಜನಿಗೆ ಶಂತನುವೆಂಬ (ಶಾಂತನು) ಹೆಸರುಳ್ಳ ಪುತ್ರನಾಗಿ ಭೂಲೋಕದಲ್ಲಿ ಜನಿಸುತ್ತಾನೆ; ಇವನಿಗೆ ಗಂಗೆಯಲ್ಲಿ ಜನಿಸಿದವನೇ ಭೀಷ್ಮ. ಪರಾಶರನೊಡನೆ ಸಂಯುಕ್ತಳಾಗಿದ್ದರೂ ಮತ್ಸ್ಯಕನ್ಯೆ ಸತ್ಯವತಿಯ ಕನ್ಯಾತ್ವ ಆ ಮುನಿಯ ವರಪ್ರಸಾದದಿಂದ ರಕ್ಷಿತವಾಗಿದ್ದು ಅವಳನ್ನು ಗಂಗೆಯಿಂದ ತ್ಯಕ್ತನಾಗಿದ್ದ ಶಂತನು ವರಿಸುತ್ತಾನೆ. ಶಂತನು ಸತ್ಯವತಿಯರ ಇಬ್ಬರು ಪುತ್ರರಲ್ಲಿ ಮೊದಲನೆಯವನಾದ ಚಿತ್ರಾಂಗದ ಯುದ್ಧದಲ್ಲಿ ಮಡಿದುದಲ್ಲದೆ, ದ್ವಿತೀಯ ಪುತ್ರನಾಗಿದ್ದ ವಿಚಿತ್ರವೀರ್ಯ ಅಂಬಿಕೆ, ಅಂಬಾಲಿಕೆ ಎಂಬ ತನ್ನ ಇಬ್ಬರು ಪತ್ನಿಯರನ್ನು ಬಿಟ್ಟು ಸಂತಾನವಿಲ್ಲದೆ ಸಾಯುತ್ತಾನೆ. ಹೀಗೆ ರಾಜ್ಯಕ್ಕೆ ಉತ್ತರಾಧಿಕಾರಿಗಳಿಲ್ಲದಂತಾಗಲು ಬ್ರಹ್ಮಚಾರಿಯಾಗಿದ್ದು ರಾಜ್ಯದ ಹಕ್ಕನ್ನು ತ್ಯಜಿಸಿದ್ದ ಬಲಮಗ ಭೀಷ್ಮನ ಸಲಹೆಯಂತೆ ಸತ್ಯವತಿ ಕೃಷ್ಣದ್ವೈಪಾಯನನನ್ನು ಬರಮಾಡಿಕೊಳ್ಳುತ್ತಾಳೆ. ತನ್ನ ಪೂರ್ವಸ್ಥಿತಿಯಲ್ಲಿ ಪರಾಶನಿಂದ ತನ್ನಲ್ಲಿ ಜನಿಸಿದ ಆ ಮುನಿಯನ್ನು ಕುರಿತು ಸತ್ಯವತಿ ಬಲತಮ್ಮನ ಪತ್ನಿಯರಲ್ಲಿ ಧರ್ಮಾನುಸಾರವಾಗಿ ಸಂತಾನೋತ್ಪತ್ತಿ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ತಾಯಿಯ ಕೋರಿಕೆಯನ್ನಂಗೀಕರಿಸಿದ ಕೃಷ್ಣದ್ವೈಪಾಯನನಿಂದ ಅಂಬಿಕೆಯಲ್ಲಿ ಧೃತರಾಷ್ಟ್ರನೂ ಅಂಬಾಲಿಕೆಯಲ್ಲಿ ಪಾಂಡುವೂ ಜನಿಸುತ್ತಾರೆ. ಹೀಗೆ ಕೃಷ್ಣದ್ವೈಪಾಯನ ಕೌರವ ಪಾಂಡವರಿಗೆ ಪರಮಪೂಜ್ಯ ತಾತನೂ ಮಹಾಭಾರತದ ಕರ್ತೃವೂ ಆಗಿದ್ದಾನೆ.

	ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಬೇಕೆಂದು ಧೃತರಾಷ್ಟ್ರನಿಗೆ ಉಪದೇಶ, ಆಗಾಗ್ಗೆ ಯುಧಿಷ್ಠಿರಾದಿಗಳಿಗೆ ಸಹನೆ ಮುಂತಾದ ಗುಣಗಳನ್ನು ಕುರಿತು ಬುದ್ಧಿವಾದ, ಧರ್ಮಬೋಧ ಮುಂತಾದವು ಮಹಾಭಾರತದಲ್ಲಿ ಕೃಷ್ಣದ್ವೈಪಾಯನ ನಿರ್ವಹಿಸುವ ಗುರುಕಾರ್ಯಗಳು. ಶಾಂತಿ ಪರ್ವದ ಪ್ರಕಾರ ಈತ ಪುತ್ರಪಾಪ್ತಿಗಾಗಿ ತಪಸ್ಸು ಮಾಡಿ ಘೃತಾಚಿಯೆಂಬ ಅಪ್ಸರೆಯಲ್ಲಿ ಶುಕನೆಂಬ ಸುಪುತ್ರನನ್ನು ಪಡಯುತ್ತಾನೆ. 					(ನೋಡಿ- ವ್ಯಾಸ)     
			(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ